Tuesday, 26 January 2016

ಬಸವಣ್ಣ ವಚನ ೨೯

ಕಾಯವಿಕಾರ ಕಾಡಿಹುದಯ್ಯ! ಮನೋವಿಕಾರ ಕೂಡಿಹುದಯ್ಯ! ಇಂದ್ರಿಯವಿಕಾರ ಸುಳಿದಿಹುದಯ್ಯ! ಆ ಸುಳುಹಿನೊಳಗೆ ಸುಳಿವುತ್ತಲಿದ್ದೇನೆ-ಸಿಲುಕಿಸದಿರಯ್ಯ! ಅನ್ಯಚಿತ್ತವಿರಿಸದಿರಯ್ಯ, ನಿಮ್ಮ ಚಿತ್ತವಿರಿಸಯ್ಯ! ಅನುಪಮಸುಖ ಸಾರಾಯ ಶರಣರಲ್ಲಿ, ಕೂಡಲಸಂಗಮದೇವ, ನಿಮ್ಮಲ್ಲಿ ಇದೇ ವರವ ಬೇಡುವೆನಯ್ಯ ?

ಬಸವಣ್ಣ ವಚನ ೨೮

ಮುನಿದೆಯಾದರೆ ಒಮ್ಮೆ ಜರಿದರೆ ಸಾಲದೆ ? ಅಕಟಕಟ, ಮದನಂಗೆ ಮಾರುಗೊಡುವರೆ ? ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ ? ಕೂಡಲಸಂಗಮದೇವ ?

ಬಸವಣ್ಣ ವಚನ ೨೭

ವಚನದ ಹುಸಿ-ನುಸುಳೆಂತು ಮಾಬುದೆನ್ನ ? ಮನದ ಮರ್ಕಟತನವೆಂತು ಮಾಬುದೆನ್ನ ? ಹೃದಯದ ಕಲ್ಮಷವೆಂತು ಮಾಬುದೆನ್ನ ? ಕಾಯವಿಕಾರಕ್ಕೆ ತರಿಸಲುವೋದೆನು! ಎನಗಿದು ವಿಧಿಯೇ, ಕೂಡಲಸಂಗಮದೇವ ?

ಬಸವಣ್ಣ ವಚನ ೨೬

ಸುಡಲೀ ಮನವೆನ್ನ (ಮುಡುಬನ) ಮಾಡಿತ್ತು ನಡೆವಲ್ಲಿ; ನುಡಿವಲ್ಲಿ ಅಧಿಕನೆಂದೆನಿಸಿತ್ತು. ಬೆಡಗಿನ ಕೀಲು ಕಳೆದು, ಕೆಡೆದ ಬಳಿಕ, ಕಡುಗೂಪ ಮಡದಿ ತಾ ಮುಟ್ಟಲಮ್ಮಳು; ಒಡಲನುರಿಗೊಂಬುದು: ಒಡವೆಯನರಸು ಕೊಂಬ; ಕಡುಗೂಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ. ಮುನ್ನ ಮಾಡಿದ ಪಾಪ ತನ್ನ ಬೆನ್ನ ಬಿಡದನ್ನಕ ಇನ್ನು ಬಯಸಿದರೊಳವೆ ಕೂಡಲಸಂಗಮದೇವ ?

ಬಸವಣ್ಣ ವಚನ ೨೫

ತನ್ನಿಚ್ಛೆಯ ನುಡಿದರೆ ಮೆಚ್ಚುವುದೀ ಮನವು. ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಮನವನು ಕಿಚ್ಚಿನೊಳಿಕ್ಕುವೆನು.

ಬಸವಣ್ಣ ವಚನ ೨೪

ತನ್ನ ವಿಚಾರಿಸಲೊಲ್ಲದು ಇದಿರ ವಿಚಾರಿಸ ಹೋಹುದೀ ಮನವು. ಏನು ಮಾಡುವೆನೀ ಮನವನು: ಎಂತು ಮಾಡುವೆನೀ ಮನವನು- ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು ?

ಬಸವಣ್ಣ ವಚನ ೨೩

ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆ ಎನ್ನ ಬಿಡು, ತನ್ನ ಬಿಡೆಂಬುದು ಕಾಯವಿಕಾರ; ಎನ್ನ ಬಿಡು, ತನ್ನ ಬಿಡೆಂಬುದು ಮನೋವಿಕಾರ. ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನ ಮನ ನಿಮ್ಮನೆಯ್ದುಗೆ ಕೂಡಲಸಂಗಮದೇವ.

ಬಸವಣ್ಣ ವಚನ ೨೨

ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆನ್ನ ಬಾಳುವೆ ಸಂಸಾರಸಂಗವ ಬಿಡದು ನೋಡೆನ್ನ ಮನವು. ಈ ನಾಯಿತನವ ಮಾಣಿಸು ಕೂಡಲಸಂಗಮದೇವಯ್ಯ ನಿಮ್ಮ ಧರ್ಮ.

ಬಸವಣ್ಣ ವಚನ ೨೧

ಅಂದಣವನೇರಿದ ಸೊಣಗನಂತೆ ಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನು ಸುಡು, ಸುಡು; ಮನವಿದು ವಿಷಯಕ್ಕೆ ಹರಿವುದು, ಮೃಡ, ನಿಮ್ಮನನುದಿನ ನೆನೆಯಲೀಯದು. ಎನ್ನೊಡೆಯನೇ, ಕೂಡಲಸಂಗಮದೇವ, ನಿಮ್ಮ ಚರಣವ ನೆನೆವಂತೆ ಕರುಣಿಸು, ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ.

ಬಸವಣ್ಣ ವಚನ ೨೦

ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು ನಿಂದಲ್ಲಿ ನಿಲಲೀಯದೆನ್ನ ಮನವು ಹೊಂದಿದಲ್ಲಿ ಹೊಂದಲೀಯದೆನ್ನ ಮನವು ಕೂಡಲಸಂಗಮದೇವಾ ನಿಮ್ಮ ಚರಣ ಕಮಲದಲ್ಲಿ ಭ್ರಮರನಾಗಿರಿಸು ನಿಮ್ಮ ಧರ್ಮ.

ಬಸವಣ್ಣ ವಚನ ೧೯

ಎನ್ನ ಮನವೆಂಬ ಮರ್ಕಟನು ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ, ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ ಅಳಲಿಸಿ ಬಳಲಿಸುತ್ತಿದೆ ನೋಡಾ! ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ ಅಪರಿಮಿತ ಸುಖವನೆಯ್ದದು ನೋಡಾ!

ಬಸವಣ್ಣ ವಚನ ೧೮

ಮುಂಗಯ್ಯ ಕಂಕಣಕೆ ಕನ್ನಡಿಯ ತೋರುವಂತೆ ಎನ್ನ ಮನ ನಿಧಾನವನೊಲ್ಲದೆ ಜರಗ ಮೆಚ್ಚಿತ್ತು ನೋಡಾ ನಾಯಿಗೆ ನಾರಿವಾಣವಕ್ಕುವುದೆ ? ಕೂಡಲಸಂಗಮದೇವ.

ಬಸವಣ್ಣ ವಚನ ೧೭

ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲ ಬಾರದು. ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ ನಾರಿ ತನ್ನ ಮನೆಯಲ್ಲಿ ಕಳುವಡೆ ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವ ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ. ಬಿಡಿಸುವರಾರುಂಟು ?

ಬಸವಣ್ಣ ವಚನ ೧೬

ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ, ವಿಚಾರಿಸಿದರೇನು ಹುರುಳಿಲ್ಲವಯ್ಯ. ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ ನೀವಿರಿಸಿದಿರಯ್ಯ ಕೂಡಲಸಂಗಮದೇವ.

ಬಸವಣ್ಣ ವಚನ ೧೫

ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ. ಚಂದ್ರ ಕುಂದೆ ಕುಂದುವುದಯ್ಯ, ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯ ? ಅಂಬುಧಿಯ ಮುನಿ ಆಪೋಶನವ ಕೊಂಡಲ್ಲಿ ಚಂದ್ರಮನಡ್ಡ ಬಂದನೆ ಅಯ್ಯ ? ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ ಜಗದ್ ನಂಟ ನೀನೇ ಅಯ್ಯ ಕೂಡಲಸಂಗಮದೇವ.

ಬಸವಣ್ಣ ವಚನ ೧೪

ಲೇಸ ಕಂಡು ಮನ ಬಯಸಿ ಬಯಸಿ ಆಶೆ ಮಾಡಿದರಿಲ್ಲ ಕಂಡಯ್ಯ. ತಾಳಮರಕ್ಕೆ ಕೈಯ್ಯ ನೀಡಿ, ಮೇಲ ನೋಡಿ ಗೋಣು ನೊಂದುದಯ್ಯ. ಕೂಡಲಸಂಗಮದೇವ ಕೇಳಯ್ಯ ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯ.

ಬಸವಣ್ಣ ವಚನ ೧೩

ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು! ತೇಲಲೀಯದು ಗುಂಡು, ಮುಳುಗಲೀಯದು ಬೆಂಡು! ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೇ ಕಾಯೋ, ಕೂಡಲಸಂಗಯ್ಯ!

ಬಸವಣ್ಣ ವಚನ ೧೨

ಎಂದೋ, ಸಂಸಾರದ ದಂದುಗ ಹಿಂಗುವುದೆನಗೆಂದೋ ? ಮನದಲ್ಲಿ ಪರಿಣಾಮವಹುದೆನಗಿನ್ನೆಂದೊ ? ಕೂಡಲಸಂಗಮದೇವಾ ಇನ್ನೆಂದೋ ಪರಮಸಂತೋಷದಲಿಹುದೆನಗೆಂದೋ ?

ಬಸವಣ್ಣ ವಚನ ೧೧

ಸಂಸಾರವೆಂಬ ಸರ್ಪ ಮುಟ್ಟಲು ಪಂಚೇಂದ್ರಿಯವಿಷಯವೆಂಬ ವಿಷದಿಂದಾನು ಮುಂದುಗೆಟ್ಟೆನಯ್ಯ, ಆನು ಹೊರಳಿ ಬೀಳುತ್ತಿದ್ದೆನಯ್ಯ; ಓಂ ನಮಶ್ಶಿವಾಯ ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯ ಕೂಡಲಸಂಗಮದೇವ.

ಬಸವಣ್ಣ ವಚನ ೧೦

ಆಸತ್ತೆನಲಸಿದೆನೆಂದರೆ ಮಾಣದು, ಬೇಸತ್ತೆ ಬೆಂಬಿದ್ದೆನೆಂದರೆ ಮಾಣದು, ಏವೆನೇವೆನೆಂದರೆ ಮಾಣದು- ಕಾಯದ ಕರ್ಮದ ಫಲಭೋಗವು. ಕೂಡಲಸಂಗನ ಶರಣರು ಬಂದು 'ಹೋ ಹೋ ಅಂಜದಿರಂಜದಿರು' ಎಂದರಾನು ಬದುಕುವೆನು.

ಬಸವಣ್ಣ ವಚನ ೯

ಇಂದಿಂಗೆಂತು ನಾಳಿಂಗೆಂತೆಂದು ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ! ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ! ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ! ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ ಕೊಂದಹುದೀ ಮಾಯೆ ಕೂಡಲಸಂಗಮದೇವ!

ಬಸವಣ್ಣ ವಚನ ೮

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರಿಯಾಗಿ ಕೂಡಿದಳು ಮಾಯೆ, ಇದಾವಾವ ಪರಿಯಲ್ಲು ಕಾಡಿತ್ತು ಮಾಯೆ. ಈ ಮಾಯೆಯ ಕಳೆವಡೆ ಎನ್ನಳವಲ್ಲ ನೀವೇ ಬಲ್ಲಿರಿ ಕೂಡಲಸಂಗಮದೇವ.

ಬಸವಣ್ಣ ವಚನ ೭

ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ! ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ! ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ! ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ! ಕೂಡಲಸಂಗಮದೇವ.

ಬಸವಣ್ಣ ವಚನ ೬

ನಾನೊಂದ ನೆನೆದರೆ, ತಾನೊಂದ ನೆನೆವುದು; ನಾನಿತ್ತಲೆಳೆದರೆ, ತಾನತ್ತಲೆಳೆವುದು; ತಾ ಬೇರೆ ಎನ್ನನಳಲಿಸಿ ಕಾಡಿತ್ತು; ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು; ಕೂಡಲಸಂಗನ ಕೂಡಿಹೆನೆಂದರೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ.

ಬಸವಣ್ಣ ವಚನ ೫

ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯ, ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು. ಇನ್ನೆಂದಿಂಗೆ ಮೋಕ್ಷವಹುದೋ ?! ಕೂಡಲಸಂಗಮದೇವ.

ಬಸವಣ್ಣ ವಚನ ೪

ಸಂಸಾರಸಾಗರದ ತೆರೆ ಕೊಬ್ಬಿ ಮುಖದ ಮೇಲೆ ಅಲೆವುತ್ತಿದೆ ನೋಡಾ! ಸಂಸಾರಸಾಗರ ಉರದುದ್ದವೇ ಹೇಳಾ ? ಸಂಸಾರಸಾಗರ ಕೊರಲುದ್ದವೇ ಹೇಳಾ ? ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ ? ಅಯ್ಯ; ಅಯ್ಯ, ಎನ್ನ ಹುಯ್ಯಲ ಕೇಳಯ್ಯ! ಕೂಡಲಸಂಗಮದೇವ, ನಾನೇವೆನೇವೆನಯ್ಯ!

ಬಸವಣ್ಣ ವಚನ ೩

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ ಕೂಡಲಸಂಗಮದೇವಾ ಕೇಳಯ್ಯಾ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ...

ಬಸವಣ್ಣ ವಚನ ೨

ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ , ಇದಿರು ಹಳೆಯಲುಬೇಡ ಇದೆ ಅಂತರಂಗ ಶುದ್ದಿ, ಇದೆ ಬಹಿರಂಗ ಶುದ್ದಿ ಇದೆ ನಮ್ಮ ಕೂಡಲ ಸಂಗಮ ದೆವನೊಲಿಸುವ ಪರಿ. -ಕೂಡಲ ಸಂಗಮ ದೇವ......

ಬಸವಣ್ಣ ವಚನ ೧

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಜ್ಯೋತಿಯ ಬಲದಿಂದ ಅಂಧಕಾರದ ಕೇಡು ನೋಡಯ್ಯ ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ ಕೂಡಲ ಸಂಗನ ಶರಣರ ಬಲದಿಂದ ಆತ್ಮನ ಅಹಂಕಾರದ ಕೇಡು ನೋಡಯ್ಯ -ಕೂಡಲ ಸಂಗಮ ದೇವ......